Chief Editor
Manohar. R (Manu)
Photo Journalist
chitrataramanu@gmail.com
+91 9845549026
ತತ್ಸಮ ತದ್ಭವ ಎರಡು ಪಾತ್ರಗಳು,ಹಲವಾರು ರೂಪಗಳು 3.5/5 ****
Posted date: 16 Sat, Sep 2023 08:45:06 AM
ತತ್ಸಮ ತದ್ಭವ ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಎರಡು ಪ್ರಮುಖ ಪಾತ್ರಗಳಲ್ಲಿರುವ  ಮೇಘನಾರಾಜ್ ಹಾಗೂ ಪ್ರಜ್ವಲ್  ದೇವರಾಜ್ ಇಡೀ ಸಿನಿಮಾವನ್ನು  ಆವರಿಸಿಕೊಂಡಿದ್ದಾರೆ. ನಾಯಕಿ ಅರಿಕಾ (ಮೇಘನಾ ರಾಜ್) ಪಾತ್ರದಿಂದಲೇ  ಚಿತ್ರ ಶುರುವಾಗುತ್ತದೆ. ತನ್ನ ಗಂಡ ಸಂಜಯ್ ನಾಪತ್ತೆ ಆಗಿರುವುದನ್ನು ಗಮನಿಸಿ ಅತ್ತೆ ಮಾವನಿಗೆ ಕರೆಮಾಡಿ ವಿಚಾರಿಸುತ್ತಾಳೆ. ಅಲ್ಲೂ ಇಲ್ಲ ಎಂದಾಗ ನೇರವಾಗಿ  ಪೊಲೀಸ್ ಠಾಣೆಗೆ ಬಂದು ನನ್ನ ಗಂಡ ಮಿಸ್ಸಿಂಗ್‌ ಆಗಿದ್ದಾರೆ. ಮನೆಯಲ್ಲಿ  ತಾಯಿ ಮಗಳು ಇಬ್ಬರೇ ಇರುವ ಕಾರಣ ಗಂಡನನ್ನು  ಹುಡುಕಿಕೊಡಿ ಎಂದು  ದೂರು  ನೀಡುತ್ತಾಳೆ. ನಂತರ ಅದರ ತನಿಖೆ ಶುರುವಾಗುತ್ತದೆ.
 
ಪೊಲೀಸ್ ಅಧಿಕಾರಿ ಅರವಿಂದ್ (ಪ್ರಜ್ವಲ್ ದೇವರಾಜ್) ಈ ಕೇಸನ್ನು ಹ್ಯಾಂಡಲ್ ಮಾಡುತ್ತಾರೆ. ತನ್ನ ಸೂಕ್ಷ್ಮ  ನಡೆಯಿಂದ ಸಮಸ್ಯೆಗಳಿಗೆ  ಪರಿಹಾರ ಕಂಡುಹಿಡಿಯುವ ಚಾಣಾಕ್ಷ  ಅಧಿಕಾರಿಯಾದ ಅರವಿಂದ್ ಈ ಕೇಸಿನ ವಿಚಾರದಲ್ಲೂ ಹಲವು ದೃಷ್ಟಿಕೋನದಲ್ಲಿ ಆಲೋಚಿಸಿ,  ಕಾಣೆಯಾದ ಸಂಜಯ್  ಹುಡುಕಲು ಮುಂದಾಗುತ್ತಾರೆ. ಕಾಣೆಯಾದ ಸಂಜಯ್ ಕೆಲಸ ಮಾಡುವ ಸಂಸ್ಥೆ , ಅವನ ಒಡನಾಟ , ಮನಸ್ಥಿತಿ , ಮನೆಯಲ್ಲಿ ಪತ್ನಿಯ ಜೊತೆ ಸಂಬಂಧ ಹೇಗಿತ್ತೆಂದು ವಿಚಾರಿಸುವಲ್ಲಿ  ಸಂಜಯ್  ತನ್ನ ಮನೆಯ ಸ್ಟೋರ್ ರೂಮ್  ನಲ್ಲೇ ಹೆಣವಾಗಿ ಪತ್ತೆಯಾಗುತ್ತಾನೆ.
 
ಹೀಗೆ  ಗಂಡ ಮಿಸ್ಸಿಂಗ್ ಅಂತ ಶುರುವಾದ ಕಥೆ ಕೊಲೆಯವರೆಗೂ ಬಂದು ನಿಲ್ಲುತ್ತೆ. ಹಾಗಾದರೆ ಕೊಲೆ ಮಾಡಿದವರು ಯಾರು? ಕೊಲೆ ಹೇಗಾಯ್ತು? ಮಿಸ್ಸಿಂಗ್ ಆಗಿದ್ದು ಹೇಗೆ? ಹೀಗೆ ತನಿಖೆಯ ಹಾದಿ  ಮುಂದೆ ಥ್ರಿಲ್ಲಿಂಗ್ ಜೊತೆ ಕನ್ ಫ್ಯೂಷನ್ ನಲ್ಲೇ ಸಾಗುತ್ತದೆ. ತಪ್ಪು ಮಾಡಿದವರ ಮನಸ್ಥಿತಿಯಲ್ಲಿ ಸ್ಟ್ರಾಂಗ್ ಹಾಗೂ ವೀಕ್ ಮೈಂಡ್ ಏನೆಲ್ಲಾ ಕೆಲಸ  ಮಾಡುತ್ತಿದೆ ಎಂಬುದನ್ನು ಆರಂಭದಿಂದ ಅಂತ್ಯದವರೆಗೂ ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ. ಕೊಲೆಯ ಸತ್ಯಾನ್ವೇಷಣೆಯ  ಮಧ್ಯೆ ಫ್ಲಾಶ್ ಬ್ಯಾಕ್ ಕೂಡ ತೆರೆದುಕೊಳ್ಳುತ್ತಾ ಹೋಗುತ್ತದೆ.
 
ಎರಡು ಪ್ರಮುಖ ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಈ  ಚಿತ್ರದಲ್ಲಿ ಥ್ರಿಲ್ಲಿಂಗ್, ಎಮೋಷನಲ್ ಎಲಿಮೆಂಟ್ಸ್‌ ಜೊತೆಗೆ ಪ್ರೇಕ್ಷಕರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವಂತಹ ಗೊಂದಲದ ಸನ್ನಿವೇಶಗಳೂ ಇವೆ.
 
ಕೊಲೆಯೊಂದರ ಸುತ್ತ ಅನುಮಾನಗಳು ಬೆಳೆಯುತ್ತ ಹೋದಂತೆ  ಕಥೆ  ಹಲವಾರು ರೋಚಕ ತಿರುವುಗಳನ್ನು ತೆಗೆದುಕೊಳ್ಳುತ್ತ, ಅನುಮಾನಗಳ ಛಾಯೆ, ನಾಪತ್ತೆಯಾದವನ ಜಾಡು, ಅದರ ಹಿಂದಿರುವ ಸ್ನೇಹ, ಪ್ರೀತಿ, ದ್ವೇಷದ ಸುಳಿಯನ್ನು ತೆರೆದಿಡುವ  ಪ್ರಯತ್ನವೇ ತತ್ಸಮ ತದ್ಭವ. ನಟಿ ಮೇಘನಾರಾಜ್  ತನ್ನ ನೋವು, ಸಂಕಷ್ಟಗಳನ್ನು ಬದಿಗೊತ್ತಿ, ಬಣ್ಣ ಹಚ್ಚಿದ್ದಾರೆ. ಮಗುವಿನ ತಾಯಿಯಾಗಿ ,ಪ್ರೇಯಸಿಯಾಗಿ, ಎರಡು ಮನಸ್ಥಿತಿಯ ಆರಿಕಾ ಹಾಗೂ ಅಕಿರಾ  ದ್ವಿಪಾತ್ರವನ್ನ ಭಾವನೆಗಳ ಮೂಲಕ ಸಮರ್ಥವಾಗಿ ನಿರ್ವಹಿಸಿ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಹಿರಿಯ ನಟಿ ಶೃತಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದಾರೆ.
 
ಮೇಘನಾ ರಾಜ್ ಮಗಳಾಗಿ ಮಹತಿ ವೈಷ್ಣವಿ ಭಟ್ ಗಮನ  ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ  ಪ್ರಶಾಂತ್ ನಟನಾ, ಬಾಲಾಜಿ ಮನೋಹರ್ , ಟಿ.ಎಸ್. ನಾಗಾಭರಣ , ಅರವಿಂದ್ ಅಯ್ಯರ್ , ಗಿರಿಜಾ ಲೋಕೇಶ್, ವರುಣ್ ಶ್ರೀನಿವಾಸ್ , ರಾಶಿ ಪೊನ್ನಪ್ಪ ಇವರೆಲ್ಲ‌ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
 
ಪನ್ನಗ ಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಅವರ ನಿರ್ಮಾಣದ ಈ ಚಿತ್ರಕ್ಕೆ  ವಿಶಾಲ್ ಆತ್ರೇಯ ಆಕ್ಷನ್ ಕಟ್ ಹೇಳಿದ್ದಾರೆ. ಒಂದರ ಹಿಂದೆ ಒಂದಂತೆ ಐದು ಹಂತವಾಗಿ ಈ ಕೊಲೆಯ ಆಗುಹೋಗುಗಳ ಚಿತ್ರಣವನ್ನು ಇವರು ಫ್ಲಾಶ್ ಬ್ಯಾಕ್ ಜೊತೆಯಲ್ಲಿ  ತೆರೆದಿಟ್ಟಿರುವ ರೀತಿ ವಿಭಿನ್ನವಾಗಿದೆ. ವಾಸುಕಿ ವೈಭವ್ ಅವರ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಛಾಯಾಗ್ರಾಹಕ ಶ್ರೀನಿವಾಸ್ ರಾಮಯ್ಯ ಅವರ  ಕ್ಯಾಮರಾ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ಇದೊಂದು ಬೇರೆಯದೇ ಪ್ಯಾಟ್ರನ್ ನಲ್ಲಿ ಮೂಡಿಬಂದಿರುವ ಚಿತ್ರ. 
ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಇಷ್ಟಪಡುವವರಿಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತತ್ಸಮ ತದ್ಭವ ಎರಡು ಪಾತ್ರಗಳು,ಹಲವಾರು ರೂಪಗಳು 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.